ಸಾರ್ವಜನಿಕ ಸ್ಥಳದಲ್ಲಿ ಲಾಂಗ್‌ ಝಳಪಿಸಿ ವಿಡಿಯೋ ಮಾಡಿದ್ದ ಪುಡಾರಿಗಳು ಅರೆಸ್ಟ್
ಚಿಕ್ಕಮಗಳೂರು,ಜೂನ್‌.24-ಸಾರ್ವಜನಿಕ ಸ್ಥಳದಲ್ಲಿ ಲಾಂಗ್‌ ಝಳಪಿಸುತ್ತ ಸೆರೆಹಿಡಿದ ಚಿತ್ರವನ್ನು ಸಾಮಾಜಿಕ ಜಾಲತಾನದಲ್ಲಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಆರೋಪದ ಮೇಲೆ ಯುವಕರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಎನ್‌‍.ಆರ್‌.ಪುರ ಪಟ್ಟಣದ 6ನೇ ವಾರ್ಡ್‌ ಬೆಟ್ಟಗೆರೆ ನಿವಾಸಿಗಳಾದ ಮೆಕಾನಿಕ್‌ ಸೈಯದ್‌ ಸಲ್ಮಾನ್‌ (22) ಮತ್ತು ಕಾರ್ಪೆಂಟರ್‌ ಮಹಮ್ಮದ್‌ ಸಾದಿಕ್‌ (25) ಬಂಧಿತರು.
ಇಬ್ಬರು ಆರೋಪಿಗಳು ಕಪ್ಪು ಕಾರಿನಲ್ಲಿ ಲಾಂಗ್‌ ಇರಿಸಿಕೊಂಡು ಹೆದರಿಕೆ ಹುಟ್ಟಿಸುವ ರೀತಿಯಲ್ಲಿ ಶೆಟ್ಟಿಕೊಪ್ಪ ಗ್ರಾಮದ ಕಡೆಯಿಂದ ಬರುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್‌ ಗುರುದತ್‌ ಕಾಮತ್‌ ನೇತೃತ್ವದಲ್ಲಿ ಪೊಲೀಸರು ಕಾರ್ಯಚರಣೆ ನಡೆಸಿ ತಾಲ್ಲೂಕಿನ ಸೌತಿಕೆರೆ ಗ್ರಾಮದ ಬಳಿ ಕಾರನ್ನು ತಡೆದು ಪರಿಶೀಲಿಸಿದಾಗ ಲಾಂಗ್‌ ಕಂಡುಬಂದಿತ್ತು.
ಆಯುಧ ಮತ್ತು ಕಾರು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಯುವರಾಜ್‌‍, ದೇವರಾಜ್‌‍, ಚೈತ್ರಾ ಪಾಲ್ಗೊಂಡಿದ್ದರು.