ರೇಣುಕಾಸ್ವಾಮಿ ಕೊಲೆ ಪ್ರಕರಣ : ‘ಡಿ’ಗ್ಯಾಂಗ್‌ನ ಮೂವರು ಜೈಲಿನಿಂದ ಬಿಡುಗಡೆ
  
ತುಮಕೂರು,ಅ.2– ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಇಂದು ತುಮಕೂರು ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ. ಈ ಪ್ರಕರಣದಲ್ಲಿ ಕೇಶವಮೂರ್ತಿ, ಕಾರ್ತಿಕ್‌ ಹಾಗೂ ನಿಖಿಲ್‌ಗೆ ಜಾಮೀನು ಲಭಿಸಿದ್ದು, ಇಂದು ಕಾರಾಗೃಹದಿಂದ ಮನೆಗೆ ತೆರಳಲಿದ್ದಾರೆ.
ಕೇಶವಮೂರ್ತಿಗೆ ಹೈಕೋರ್ಟ್‌ನಿಂದ ಹಾಗೂ ಕಾರ್ತಿಕ್‌ ನಿಖಿಲ್‌ಗೆ 57ನೇ ಸಿಸಿಎಚ್‌ ನ್ಯಾಯಾಲಯದಿಂದ ಸೆ.23ರಂದು ಷರತ್ತುಬದ್ಧ ಜಾಮೀನು ಲಭಿಸಿತ್ತು. ಆದರೆ ಜಾಮೀನು ಶ್ಯೂರಿಟಿಗೆ 2 ಲಕ್ಷ ಹಣ ಹಾಗೂ ಇಬ್ಬರು ಶ್ಯೂರಿಟಿದಾರರನ್ನು ಹೊಂದಿಸಲು ಈ ಮೂವರ ಕುಟುಂಬಸ್ಥರಿಗೆ ಸಾಧ್ಯವಾಗಿರಲಿಲ್ಲ.
ಸತತ 9 ದಿನಗಳಿಂದ ಶ್ಯೂರಿಟಿದಾರರು ಸಿಗದೆ ಕುಟುಂಬಸ್ಥರು ಪರದಾಡಿದ್ದರು. ನಿನ್ನೆ ಜಾಮೀನು ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾತ್ರಿ ತುಮಕೂರು ಜೈಲಾಧಿಕಾರಿಗಳಿಗೆ ಜಾಮೀನು ಆದೇಶದ ಪ್ರತಿ ಮೇಲ್‌ ಮೂಲಕ ತಲುಪಿದೆ.ಹಾಗಾಗಿ ಇಂದು ಬೆಳಗ್ಗೆ ಈ ಮೂವರು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
