ದೋಸ್ತಿ ನಾಯಕರಿಗೆ ಜಿಟಿಡಿ ಟಾಂಗ್
    
ಮೈಸೂರು,ಅ.3– ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ, ಜೆಡಿಎಸ್‌‍ ದೋಸ್ತಿ ನಾಯಕರಿಗೆ ಶಾಸಕ ಹಾಗೂ ಜೆಡಿಎಸ್‌‍ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಟಾಂಗ್‌ ಕೊಟ್ಟಿದ್ದಾರೆ.
ಮೈಸೂರು ದಸರಾ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ.ರಾಜೀನಾಮೆ ಕೊಡೋದೆ. ಆದರೆ ಎಫ್‌ಐಆರ್‌ ಆಗಿರೋ ಎಲ್ಲಾ ನಾಯಕರು ಕೊಡಲಿ. ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿಯೂ ಕೊಡಲಿ ಎಂದು ಹೇಳುವ ಮೂಲಕ ಸ್ವಪಕ್ಷದ ನಾಯಕ ಕುಮಾರಸ್ವಾಮಿಗೆ ಟಾಂಗ್‌ ಕೊಟ್ಟರು.
ಸಿಎಂ ಪರ ಬ್ಯಾಟ್‌ ಬೀಸಿದ ಜೆಡಿಎಸ್‌‍ ಶಾಸಕ ಜಿ.ಟಿ.ದೇವೇಗೌಡ, ಎಲ್ಲಾ ಗಾಜಿನ ಮನೆಯಲ್ಲಿ ಕೂತಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲು ನ್ಯಾಯಾಲಯ ಹೇಳಿದೆಯಾ? ಕೇಂದ್ರದಲ್ಲಿ ಮಂತ್ರಿ ಆದವರಿಗೆ ಜವಾಬ್ದಾರಿ ಬೇಡವಾ? ಕುಮಾರಸ್ವಾಮಿಗೆ ರಾಜೀನಾಮೆ ಕೊಡು ಅಂದರೆ ಕೊಡುತ್ತಾರಾ? 136 ಸ್ಥಾನ ಗೆದ್ದು ಸಿಎಂ ಆಗಿರುವ ಸಿದ್ದರಾಮಯ್ಯ ರಾಜೀನಾಮೆ ಕೊಡಲು ಆಗುತ್ತಾ ? ರಾಜೀನಾಮೆ ಕೊಡಿ ರಾಜೀನಾಮೆ ಕೊಡಿ ಅಂದರೆ ಕೊಡುವುದಕ್ಕೆ ಆಗುತ್ತಾ? ಒಂದು ಅತ್ಯಾಚಾರ, ಕೊಲೆ ಮೂರು ತಿಂಗಳು ಮಾಧ್ಯಮ ತೋರಿಸುತ್ತೆ.
ಒಂದು ಎಫ್‌ಐಆರ್‌ ನಾ ಎಷ್ಟು ದಿನ ತೋರಿಸುತ್ತಿರಾ? ಯಾರ ಯಾರ ಮೇಲೆ ಎಫ್‌ ಐ ಆರ್‌ ಆಗಿದೆ ಅವರೆಲ್ಲರೂ ರಾಜೀನಾಮೆ ಕೊಡಿ ಎಂದು ಸವಾಲು ಹಾಕಿದರು.
ಶಾಸಕ ಜಿ.ಟಿ.ದೇವೇಗೌಡ ಭಾಷಣಕ್ಕೆ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌‍ ಸಚಿವರು ಶಾಸಕರು ಫಿದಾ ಆದರು. ಭಾಷಣ ಮುಗಿಸಿ ಬಂದ ಜಿ.ಟಿ.ದೇವೇಗೌಡರಿಗೆ ಶಾಸಕರಾದ ರಮೇಶ್‌ ಬಂಡೀಸಿದ್ದೇಗೌಡ ತನ್ವೀರ್‌ ಸೇಠ್‌ ಎದ್ದು ನಿಂತು ಗೌರವ ಸಲ್ಲಿಸಿದರು. ಬಳಿಕ ಸಚಿವ ಹೆಚ್‌.ಕೆ.ಪಾಟೀಲ್‌, ವೆಂಕಟೇಶ್‌ ಹಸ್ತಲಾಘವ ಮಾಡಿ ಅಭಿನಂದನೆ ಸಲ್ಲಿಸಿದರು.
