ಯತೀಂದ್ರ ಹೇಳಿಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಜಾರಿಕೊಂಡ ಜಾರಕಿಹೊಳಿ
ಬೆಂಗಳೂರು,ಜ.17- ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿ ಮುಂದುವರೆ ಯುತ್ತಾರೆ ಎಂಬುದು ಯತೀಂದ್ರ ಅವರ ವೈಯಕ್ತಿಕ ಹೇಳಿಕೆ. ಅದರ ಬಗ್ಗೆ ತಾವು ಪ್ರತಿಕ್ರಿಯಿಸುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹೈಕಮಾಂಡ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.ಅದರ ನಂತರವೂ ಕೆಲವರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಹೇಳುತ್ತಲೇ ಇದ್ದಾರೆ ಎಂದರು.ಯಾವ ರೀತಿಯ ಚರ್ಚೆ ಮತ್ತು ನಿರ್ಣಯಗಳಾಗಿವೆ ಎಂಬುದು ನಮಗೆ ಗೊತ್ತಿಲ್ಲ. ಹೀಗಾಗಿ ಯಾರೋ, ಎಲ್ಲೋ ನೀಡಿದ ಹೇಳಿಕೆಗೆ ಸಚಿವರು, ಶಾಸಕರು ಪ್ರತಿಕ್ರಿಯಿಸಲಾಗುವುದಿಲ್ಲ. ಅಂತಹ ಹೇಳಿಕೆಗಳು ನಮಗೆ ಸಂಬಂಧಪಟ್ಟಿದ್ದೂ ಅಲ್ಲ ಎಂದು ತಿಳಿಸಿದರು.
  : ಶಾಸಕರು-ಕಾರ್ಯಕರ್ತರೂ ಸೇರಿ 70 ಮಂದಿ ನಿಗಮ ಮಂಡಳಿ ಗ್ಯಾರಂಟಿ
ಇತ್ತೀಚೆಗೆ ಎಲ್ಲಾ ಸಚಿವರೊಂದಿಗೆ ದೆಹಲಿಗೆ ಭೇಟಿ ನೀಡಿದ ವೇಳೆ ಲೋಕಸಭೆ ಚುನಾವಣೆ ಕುರಿತಂತೆ ಮಾತ್ರ ಚರ್ಚೆಯಾಯಿತು. ಉಳಿದಂತೆ ಉಪಮುಖ್ಯಮಂತ್ರಿ ಅಥವಾ ಬೇರೆ ಯಾವುದೇ ವಿಷಯಗಳ ಕುರಿತು ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.