ರಾಮೇಶ್ವರಂ ಕೆಫೆ ಸ್ಫೋಟಿಸಿದ ಉಗ್ರರ ಬಂಧನ : ಎನ್‍ಐಎ ಮತ್ತು ರಾಜ್ಯ ಪೊಲೀಸರ ಕಾರ್ಯವೈಖರಿಗೆ ಸಿಎಂ ಶ್ಲಾಘನೆ
ಮೈಸೂರು, ಏ.13-ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಎನ್‍ಐಎ ತಂಡ ಮತ್ತು ಕರ್ನಾಟಕ ಪೊಲೀಸ್‍ನ ಕಾರ್ಯವೈಖರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿ ರಾಮೇಶ್ವರಂ ಕೆಫೆ ಬಾಂಬ್ ಪ್ರಕರಣದ ಆರೋಪಿಗಳನ್ನು ಕೋಲ್ಕತ್ತಾದಿಂದ ಬೆಂಗಳೂರಿಗೆ ಕರೆ ತಂದು ನಂತರ ವಿಚಾರಣೆ ಮಾಡಿ ಹೆಚ್ಚಿನ ವಿವರ ಪಡೆಯಲಾಗುವುದು ಎಂದು ಹೇಳಿದ್ದಾರೆ.
ಎನ್‍ಡಿಎಗೆ ಪೂರ್ಣ ಬಹುಮತ ದೊರಕುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಬಿಜೆಪಿ ವಿರುದ್ಧವಿರುವ ಇಂಡಿಯಾ ಮೈತ್ರಿಗೆ ಬಹುಮತ ದೊರೆಯಲಿದೆ. 400ಕ್ಕೂ ಹೆಚ್ಚು ಸ್ಥಾನ ಪಡೆಯುವುದಾಗಿ ಹೇಳಿಕೊಳ್ಳುತ್ತಿರುವ ಬಿಜೆಪಿಯದ್ದು ಜನರ ದಾರಿತಪ್ಪಿಸುವ ಕಾರ್ಯತಂತ್ರ ಎಂದರು.
ಮೋದಿಯವರು ನಾಳೆ ಮೈಸೂರಿಗೆ ಆಗಮಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಮೋದಿಯವರು ಬಂದು ಹೋಗಲು ನನ್ನದೇನೂ ತಕರಾರಿಲ್ಲ. ಕರ್ನಾಟಕಕ್ಕೆ ಏನು ಮಾಡಿದ್ದಾರೆ ಎಂದು ರಾಜ್ಯದ ಜನತೆಗೆ ಹೇಳಬೇಕು. ನಿರುದ್ಯೋಗ, ತೆರಿಗೆ ಹಂಚಿಕೆ, ಬರಗಾಲಕ್ಕೆ ಇಂದಿನವರೆಗೂ ಯಾಕೆ ಪರಿಹಾರ ನೀಡಿಲ್ಲ ಎಂಬುದಕ್ಕೆಲ್ಲಾ ಉತ್ತರ ಹೇಳಲಿ ಎಂದು ಗರಮ್ಮಾದರು.
ಅನಂತಕುಮಾರ್ ಹೆಗಡೆ ಮೇಲೆ ಕ್ರಮ ಏಕಿಲ್ಲ:ಅಂಬೇಡ್ಕರ್ ಬಂದರೂ ಸಂವಿಧಾನ ಬದಲಿಸಲು ಸಾಧ್ಯವಿಲ್ಲ. ಬಿಜೆಪಿ ಸಂವಿಧಾನದ ಪರವಾಗಿದೆ ಎಂದಿರುವ ಮೋದಿಯವರ ಹೇಳಿಕೆಗೆ ಉತ್ತರಿಸಿದ ಅವರು, ಹಾಗಾದರೆ ಅನಂತಕುಮಾರ್ ಹೆಗಡೆ ಮೇಲೆ ಕ್ರಮ ಯಾಕೆ ತೆಗೆದುಕೊಂಡಿಲ್ಲ. ಅವರನ್ನು ಪಕ್ಷದಿಂದ ಅಥವಾ ಮಂತ್ರಿ ಸ್ಥಾನದಿಂದ ಕೈಬಿಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.
ಉತ್ತರ ಕರ್ನಾಟಕದಲ್ಲಿ ಐದು ವರ್ಷಗಳಿಂದ ಏನೂ ಕೆಲಸ ಮಾಡದೇ ಮನೆಯಲ್ಲಿ ಕುಳಿತಿದ್ದರು. ಕೊನೇ 3-4 ತಿಂಗಳು ಬಂದು ಸೋಲುವ ವರದಿಯಾಧಾರದ ಮೇಲೆ ಅನಂತಕುಮಾರ್ ಅವರಿಗೆ ಟಿಕೆಟ್ ಕೊಟ್ಟಿಲ್ಲ ಎಂದರು. ಬಿಜೆಪಿ ಯಾವತ್ತೂ ಸಂವಿಧಾನದ ಪರವಾಗಿಲ್ಲ. ಸಂವಿಧಾನ ಜಾರಿಯಾದಾಗ ಸಾವರ್ಕರ್ ಹಾಗೂ ಗೋಲ್ವಾಲ್ಕರ್ ಅವರು ಭಾರತದ ಸಂವಿಧಾನವನ್ನು ವಿಧಿರೋಸಿದ್ದರು ಎಂದು ಹೇಳಿದರು.