ನಾನು ತಪ್ಪು ಮಾಡಿಲ್ಲ, ಯಾವುದೇ ತನಿಖೆಗೆ ಸಿದ್ಧ : ಎಚ್‌.ಡಿ.ರೇವಣ್ಣ
ಹಾಸನ,ಮೇ.1-ನಾನೇನೂ ತಪ್ಪು ಮಾಡಿಲ್ಲ, ಯಾವುದೇ ರೀತಿಯ ತನಿಖೆಯನ್ನಾದರೂ ಎದುರಿಸಲು ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದ್ದಾರೆ. ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ.
ಆರೋಪವನ್ನು ಎದುರಿಸುವ ಶಕ್ತಿ ನಮಗಿದೆ. ತಪ್ಪೇ ಮಾಡಿಲ್ಲ ಎಂದ ಮೇಲೆ ಆರೋಪದ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಬೇಕು? ಸದ್ಯಕ್ಕೆ ಈ ಬಗ್ಗೆ ತಾವು ಹೆಚ್ಚೇನೂ ಹೇಳಲು ಬಯಸುವುದಿಲ್ಲ ಎಂದರು.ಷಡ್ಯಂತ್ರವನ್ನು ಎದುರಿಸುವ ಶಕ್ತಿ ಇದೆ. ಹೀಗಾಗಿ ತನಿಖೆಯನ್ನು ಎದುರಿಸುವ ಸಾಮರ್ಥ್ಯವನ್ನು ದೇವರು ತಮಗೆ ಕೊಟ್ಟಿದ್ದಾನೆ ಎಂದು ಹೇಳಿದ್ದಾರೆ.
ಎಸ್‌ಐಟಿ ಸೇರಿದಂತೆ ಯಾವುದೇ ರೀತಿ ತನಿಖೆ ಎದುರಿಸಲು ಸಿದ್ಧ. ಎಸ್‌ಐಟಿ ನೋಟಿಸ್‌ ಪ್ರತಿಯನ್ನು ಮನೆಗೆ ಅಂಟಿಸಿ ಹೋಗಿದೆ. ಅದರಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ತನಿಖೆಗೆ ಸಹಕಾರ ನೀಡುವುದಾಗಿ ಅವರು ತಿಳಿಸಿದರು.ಇದಕ್ಕೂ ಮುನ್ನ ಅವರು ಹರದನಹಳ್ಳಿಯ ಶಿವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಹೊಳೆನರಸೀಪುರದ ತಮ್ಮ ನಿವಾಸದಲ್ಲಿ ಕುಟುಂಬದ ಸದಸ್ಯರೊಂದಿಗೆ ಹೋಮ ನಡೆಸಿದರು. ಹೋಮದಲ್ಲಿ ಭಾಗಿಯಾಗಿದ್ದ ರೇವಣ್ಣ ಅವರು ಪೂರ್ಣಾಹುತಿ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.