ಪೆನ್‌ಡ್ರೈವ್‌ ಪ್ರಕರಣ : ಎಸ್‌ಐಟಿ ಮುಂದೆ ಹಾಜರಾದ ದೇವರಾಜೇಗೌಡ
ಹಾಸನ, ಮೇ 3-ಅಶ್ಲೀಲ ವಿಡಿಯೋ ಪ್ರಕರಣ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಂದೆ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಸಂಸದ ಪ್ರಜ್ವಲ್‌ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್‌ ತನ್ನ ಬಳಿ ಇದ್ದ ಪೆನ್‌ಡ್ರೈವ್‌ನ್ನು ಬಿಜೆಪಿ ಮುಖಂಡ ದೇವರಾಜೇಗೌಡ ಅವರಿಗೆ ಮಾತ್ರ ಕೊಟ್ಟಿದ್ದೆ ಎಂದು ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಹೇಳಿದ್ದನು.
ಹೊಳೆನರಸೀಪುರ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣದ ಮುಂದಿನ ತನಿಖೆ ಸಂಬಂಧ ವಿಚಾರಣೆಗೆ ಹಾಜರಾಗಿ ತಮ್ಮ ಬಳಿ ಲಭ್ಯವಿರುವ ದಾಖಲೆಗಳ ಜೊತೆ ನೊಟೀಸ್‌ ಸ್ವೀಕರಿಸಿದ ಕೂಡಲೇ ತನಿಖಾಧಿಕಾರಿಗಳ ಮುಂದೆ ವಿಚಾರಣೆ ತನಿಖೆಗೆ ಸಹಕರಿಸುವಂತೆ ಎಸ್‌ಐಟಿ ದೇವರಾಜೇಗೌಡರಿಗೆ ನೋಟೀಸ್‌ ನೀಡಿತ್ತು. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳ ಮುಂದೆ ನಿನ್ನೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪೆನ್‌ಡ್ರೈವ್‌ಗಳನ್ನು ಹಂಚಿರುವವರ ಬಗ್ಗೆ ಹಲವು ಮಾಹಿತಿಗಳನ್ನು ಎಸ್‌ಐಟಿ ಮುಂದೆ ಹೇಳಿರುವುದಾಗಿ ದೇವರಾಜೇಗೌಡ ತಮ್ಮ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದಾರೆ.
ಈ ಪ್ರಕರಣದ ತನಿಖೆಗೆ ಎಲ್ಲಾ ಸಹಕಾರ ನೀಡುವುದಾಗಿ ಅಕಾರಿಗಳ ಮುಂದೆ ಹೇಳಿದ್ದೇನೆ. ಪೆನ್‌ಡ್ರೈವ್‌ನಲ್ಲಿರುವ ಸಂತ್ರಸ್ತೆಯರ ಜೊತೆ ಚೆಲ್ಲಾಟ ಮಾಡಿರುವ ರಾಜಕಾರಣಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದೇನೆ ಎಂದು ದೇವರಾಜೇಗೌಡ ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದಾರೆ.