ಸಂಸದ ಪ್ರಜ್ವಲ್‌ ರೇವಣ್ಣ ನಿವಾಸದಲ್ಲಿ ಎಫ್‌ಎಸ್‌‍ಎಲ್‌ ತಂಡ ಪರಿಶೀಲನೆ
ಹಾಸನ, ಮೇ 13-ಸಂಸದ ಪ್ರಜ್ವಲ್‌ ರೇವಣ್ಣ ಅವರ ಆರ್‌ಸಿ ರಸ್ತೆಯಲ್ಲಿರುವ ನಿವಾಸಕ್ಕೆ ಇಂದು ಬೆಳಗ್ಗೆ ಎಫ್‌ಎಸ್‌‍ಎಲ್‌ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪ್ರಜ್ವಲ್‌ ವಿರುದ್ಧ ಸಿಐಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಸಾಕ್ಷ್ಯ ಸಂಗ್ರಹಿಸಲು ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸಂಸದರ ನಿವಾಸಕ್ಕೆ ಆಗಮಿಸಿದ್ದಾರೆ.
ಸ್ಥಳೀಯ ಪೊಲೀಸರ ಸಮುಖದಲ್ಲಿ ಎಫ್‌ಎಸ್‌‍ಎಲ್‌ ಅಧಿಕಾರಿಗಳು ಸಂಸದರ ನಿವಾಸದ ಬೀಗ ತೆಗೆದು ಒಳಗೆ ಹೋಗಿ ಪ್ರತಿ ಕೊಠಡಿಯನ್ನು ಪರಿಶೀಲಿಸುತ್ತಿದ್ದಾರೆ.ಈ ಸಂದರ್ಭದಲ್ಲಿ ಸಂಸದರ ನಿವಾಸದ ಬಳಿ ಬಿಗಿ ಪೊಲೀಸ್‌‍ ಬಂದೋಬಸ್ತ್‌ ಮಾಡಲಾಗಿತ್ತು.
ಈಗಾಗಲೇ ಎಸ್‌‍ಐಟಿ ಅಧಿಕಾರಿಗಳ ತಂಡ ಸಂತ್ರಸ್ತೆಯನ್ನು ಸಂಸದರ ನಿವಾಸಕ್ಕೆ ಕರೆತಂದು ಮಹಜರು ನಡೆಸಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ತೆರಳಿದ್ದಾರೆ. ಸಂಸದ ಪ್ರಜ್ವಲ್‌ ಅವರ ಬಳಿ ಹಾಸ್ಟೆಲ್‌ ಪ್ರವೇಶಕ್ಕಾಗಿ ಸಹಾಯ ಕೇಳಿಕೊಂಡು ಹೋದಾಗ ಎಂಪಿ ಕ್ವಾರ್ಟಸ್‌‍ನಲ್ಲಿ ನನ್ನ ಮೇಲೆ ಅತ್ಯಾಚಾರ ವೆಸಗಿದ್ದಾರೆಂದು ಸಿಐಡಿಗೆ 44 ವರ್ಷದ ಮಹಿಳೆ ದೂರು ನೀಡಿದ್ದಾರೆ. ಈ ಪ್ರಕರಣದ ತನಿಖೆಯ ಹಿನ್ನೆಲೆಯಲ್ಲಿ ಇಂದು ಎಫ್‌ಸ್‌‍ಎಲ್‌ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.