ಪಕ್ಷವಿರೋಧಿ ಚಟುವಟಿಕೆ : ಜೆಡಿಎಸ್‌‍ನಿಂದ ಯಶೋಧಾ ರಾಜಣ್ಣ ಅಮಾನತ್ತು
ಬೆಂಗಳೂರು, ಮೇ 29-ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿ ಲೇಔಟ್‌ ವಿಧಾನ ಸಭಾ ಕ್ಷೇತ್ರದ ಮುಖಂಡರಾದ ಯಶೋಧಾ ರಾಜಣ್ಣ ಅವರನ್ನು ಜೆಡಿಎಸ್‌‍ ಪ್ರಾಥಮಿಕ ಸದಸ್ಯತ್ವದಿಂದ ಅಮಾನತ್ತು ಮಾಡಲಾಗಿದೆ.
ಜೆಡಿಎಸ್‌‍ ನಗರ ಘಟಕದ ಅಧ್ಯಕ್ಷ ಹೆಚ್‌.ಎಂ.ರಮೇಶ್‌ಗೌಡ ಅವರು ಅಮಾನತ್ತು ಆದೇಶ ಹೊರಡಿಸಿದ್ದಾರೆ. ಯಶೋಧಾ ರಾಜಣ್ಣ ಅವರು ಕಳೆದ ಹಲವು ದಿನಗಳಿಂದ ನಿರಂತರವಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿಕೊಂಡು ಬಂದಿದ್ದರು. ಈ ಬಗ್ಗೆ ಹಲವಾರು ಬಾರಿ ಅವರಿಗೆ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೂ ಅವರು ಪಕ್ಷದ ಆದೇಶವನ್ನು ಧಿಕ್ಕರಿಸಿ ಪಕ್ಷ ವಿರೋಧಿ ಕೃತ್ಯಗಳನ್ನು ಮುಂದುವರಿಸಿದ್ದರು ಎಂದು ರಮೇಶ್‌ಗೌಡ ತಿಳಿಸಿದ್ದಾರೆ.
ಅಲ್ಲದೆ, ಮಹಾಲಕ್ಷ್ಮಿ ಲೇಔಟ್‌ನ ಜೆಡಿಎಸ್‌‍ ಪಕ್ಷದ ಮುಖಂಡರು ಈ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್‌.ಡಿ.ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷರಾದ ಹೆಚ್‌.ಡಿ.ಕುಮಾರಸ್ವಾಮಿ ಅವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಯಶೋಧಾ ರಾಜಣ್ಣ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.