ರಕ್ತದಾನ ಕುರಿತು ಜಾಗೃತಿ ಜಾಥಾಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಚಾಲನೆ
ಬೆಂಗಳೂರು, ಜೂ.14-ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ನಗರದಲ್ಲಿ ಇಂದು ವಿಧಾನ ಸೌಧದಿಂದ ಕಂಠೀರವ ಕ್ರೀಡಾಂಗಣದವರೆಗೆ ರಕ್ತದಾನದ ಕುರಿತು ಜಾಗೃತಿ ಜಾಥಾಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಚಾಲನೆ ನೀಡಿದರು.ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ಒಬ್ಬರ ಜೀವ ಉಳಿಸಲು ವೈದ್ಯರೇ ಆಗಬೇಕಿಲ್ಲ. ರಕ್ತದಾನ ಮಾಡುವ ಮೂಲಕವು ಒಬ್ಬರ ಜೀವ ಉಳಿಸಬಹುದು. ರಕ್ತದಾನ ಮಾಡುವ ಮೂಲಕ ಹಲವರ ಜೀವನದಲ್ಲಿ ಬದಲಾವಣೆ ತರಬಹುದು ಎಂದು ಹೇಳಿದರು.
ದೇಶದಲ್ಲಿ ರಕ್ತಕ್ಕಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ರಕ್ತದಾನಕ್ಕೆ ನಾವೆಲ್ಲರೂ ಮುಂದಾಗಬೇಕಿದೆ. ಹೆಚ್ಚು ರಕ್ತದಾನದ ಅಗತ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.ರಕ್ತದಾನದ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವತ್ತ ಆರೋಗ್ಯ ಇಲಾಖೆ ಹಾಗೂ ಕರ್ನಾಟಕ ಸ್ಟೇಟ್‌ ಏಡ್ಸ್ ಪ್ರಿವೆನ್ಷನ್‌ ಸೊಸೈಟಿ ಅವರು ಹಮಿಕೊಂಡಿದ್ದ ಈ ರೀತಿಯ ಜಾಥಾ ಕಾರ್ಯಕ್ರಮಗಳು ಉತ್ತಮವಾದವು ಎಂದರು.
ಮಾನವನ ರಕ್ತದ ಪ್ರತಿಯೊಂದು ಹನಿಯೂ ಅಮೃತಕ್ಕೆ ಸಮಾನ. ರಕ್ತದಾನ ಮಾಡುವ ನಮ್ಮ ಒಂದು ಜವಾಬ್ದಾರಿಯುತ ನಡೆ ಮತ್ತೊಬ್ಬರ ಬಾಳಿನಲ್ಲಿ ಅತೀದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಈ ನಿಟ್ಟಿನಲ್ಲಿ ಇಂದು ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ರಕ್ತದಾನ ಕುರಿತು ಜಾಗೃತಿ ಮೂಡಿಸಲು ಹೈಕೋರ್ಟ್‌ ನ ಮುಂಭಾಗದಿಂದ ಕಂಠೀರಬವ ಕ್ರೀಡಾಂಗಣದವರೆಗೆ ವಾಕಾಥಾನ್…../jMdgiD1Mwg
ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಪ್ರತಿ ವರ್ಷ ಜೂನ್‌ 14ರಂದು ಜಗತ್ತಿನಾದ್ಯಂತ 2004 ರಿಂದ ಆಚರಿಸಿಕೊಂಡು ಬರಲಾಗಿತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಸಹ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ರಾಜ್ಯ ಮಟ್ಟದಲ್ಲಿ ಜಾಥಾದ ಮೂಲಕ ಆಚರಿಸಿ, ಸಾರ್ವಜನಿಕರಲ್ಲಿ ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ರಕ್ತವನ್ನು ಸಕಾಲದಲ್ಲಿ ಪೂರೈಕೆ ಮಾಡುವ ಮುಖಾಂತರ ಜೀವಗಳನ್ನು ಉಳಿಸಬಹುದು. ಈ ನಿಟ್ಟಿನಲ್ಲಿ ಯಾವುದೇ ಪ್ರತಿಲಾಪೇಕ್ಷೆ ಇಲ್ಲದೇ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ದಾನಿಗಳನ್ನು ಗೌರವಿಸಿ ಇತರರನ್ನು ರಕ್ತದಾನ ಮಾಡುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಇಂದು ಆರೋಗ್ಯ ಇಲಾಖೆ ಹಾಗೂ ಕೆಎಸ್‌‍ಎಪಿಎಸ್‌‍ ಸಂಸ್ಥೆಯಿಂದ ಜಾಥಾ ಹಮಿಕೊಳ್ಳಲಾಗಿತ್ತು.ಜಾಥಾದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಸ್ವಯಂ ಸೇವಕರು ರಕ್ತದಾನ ಮಾಡುವ ಕುರಿತು ಪ್ರತಿಜ್ಞೆ ಸ್ವೀಕರಿದರು.