NLP_Assignment_1 / Kenda Sampige /article_121.txt
CoolCoder44's picture
Upload folder using huggingface_hub
7f4117a verified
ವಜ್ರವನ್ನೇ “ಕೆಲಸಕ್ಕೆ ಬಾರದ ವಜ್ರದ ಹೊಳಪಿಗೆ ಮಾರು ಹೋಗುತ್ತೇವೆ ನಾವು” ಎಂದುಚ್ಛರಿಸುವ ಧೀಶಕ್ತಿ ಇರುವ ಆಶಾ ಜಗದೀಶರವರ ಎರಡನೆ ಕವನ ಸಂಕಲನ “ನಡು ಮಧ್ಯಾಹ್ನದ ಕಣ್ಣು” . ಮಧ್ಯಾಹ್ನವೇ ನಡು. ಅಂಥದ್ದರಲ್ಲಿ ಮಧ್ಯಾಹ್ನದ ನಡು ಹೊತ್ತಿಗೆ ಕಣ್ಣು ತೆರೆದು ಅದರ ಝಳದ ಬೆಳಕಿನಲ್ಲಿ ಸ್ಪುರಿಸಿದ ಕವಿತೆಗಳಿವು. ಹಾಗಾಗಿ ಫಳ ಫಳ ಹೊಳೆಯುವ ಹೊಳಪಿನ ಅಂತರಂಗದ ಕವಿತೆಗಳಂತೆ ಭಾಸವಾಗುವುದರಲ್ಲಿ ತಪ್ಪಿಲ್ಲ. ಒಂದು ರೀತಿಯಲ್ಲಿ ಹೇಳುವುದಾದರೆ ಅವರದೇ ಆದ ಖಾಸಗಿ ಬದುಕಿನ ಸ್ವಗತಗಳೆ ಹೆಚ್ಚಿನದೆಲ್ಲ ಕವಿತೆಗಳ ವಸ್ತುಗಳಾಗಿವೆ. ಕವಿತೆ ಎಂದರೆ ಇದೇ ತಾನೇ ಅಲ್ಲವೇ? ನಮ್ಮದೇ ಏಕಾಂತದಲ್ಲಿ ನಾವನುಭವಿಸಿದ ತಲ್ಲಣಗಳು, ಲೋಕದೊಳಗೆ ಗುರುತಿಸಿದ ಸೂಕ್ಷ್ಮಾತಿ ಸೂಕ್ಷ್ಮ ಪದರಗಳು, ಒಟ್ಟಿನಲ್ಲಿ ತನ್ನ ಸ್ವ-ವಿಮರ್ಶೆಗಳೆ ಇಲ್ಲಿ ಕವಿತೆಗಳಾಗಿವೆ ಎನ್ನಬಹುದು. ಕನ್ನಡ ಕವಿತೆಯ ಲೋಕ ಹಿಡಿಯಬೇಕಿರುವ ಸರಿಯಾದ ದಾರಿಯಲ್ಲೇ ಇವರ ಕವಿತೆಗಳು ಚಲಿಸುತ್ತಿವೆ. ನವ್ಯ ಕವಿತೆಗಳ ನಾಡಿಮಿಡಿತವನ್ನು ಕವಯತ್ರಿ ಹೃದ್ಯವಾಗಿ ಧ್ವನಿಸಿದ್ದಾರೆ. ತುಂಬಾ ಆಳವಾದ ಆಲೋಚನೆಗಳೊಂದಿಗೆ ಹೊಸ ಸ್ವರೂಪದ ಕವಿತೆಗಳನ್ನು ನಾವಿಲ್ಲಿ ಕಾಣಬಹುದು.
(ಆಶಾ ಜಗದೀಶ್‌)
“ಭೂಮಿ ಮತ್ತು ಆಕಾಶಗಳು /ತಮ್ಮ ಪ್ರೇಮ ಕಿತಾಬಿನಲ್ಲಿ ಇನ್ನೂ ಸ್ಕಲಿಸಬೇಕಿರುವ ಅಸಂಖ್ಯ ಅಸ್ಕಲಿತ/ ಪ್ರೇಮ ನಿವೇದನೆಗಳ/ಅಡಿ ಮತ್ತು ಮುಡಿಗೆ / ನುಡಿ ದಾನ ಮಾಡುತ್ತಿದೆ” ಹೀಗೆ ಸಿಹಿಯಾಗಬೇಕೆಂಬ ಕವಿತೆಯಲ್ಲಿ ಅಗಾಧ ಕಡಲು, ನಿಗೂಢ ಭೂಮಿ ಮತ್ತು ಆಕಾಶಗಳ ಕುರಿತು ಇನ್ನೂ ಆಳವಾಗಿಯೆ ನಮ್ಮೊಡನೆ ತೆರೆದಿಟ್ಟಿದ್ದಾರೆ. ತನ್ನೊಳಗಿನ ಭಾವನೆಗಳನ್ನೆಲ್ಲ ಪ್ರೇಮದ ಪಿಸು ಮಾತಿನಲ್ಲಿ ಅರುಹಿ ಮೈಮನಗಳನ್ನು ಹಗುರಾಗಿಸಿಕೊಂಡ ಕೀರ್ತಿ ಇಲ್ಲಿನ ಕವಿತೆಗಳಿಗೆ ಸಲ್ಲಬೇಕು. ಕವಿತೆಯ ಭಾವವನ್ನು ಸಾರ್ವಕಾಲಿಕ ಮಾಡಿ ತಮ್ಮ ನವಿರು ಪ್ರೀತಿ ಪ್ರೇಮದ ತಲ್ಲಣಗಳನ್ನು ಕಂಡು ಕಾಣದಂತೆ ಸಂವೇದಿಸಿದ್ದಾರೆ. ಕವಿತೆಯ ಸಖ್ಯದಿಂದ, ದಾಂಪತ್ಯ ಸಖ್ಯವನ್ನು ಓದುಗರು ತಮ್ಮ ಬಾಳಲ್ಲಿ ಕಂಡುಕೊಳ್ಳುವ ಪ್ರಯತ್ನ ಮಾಡಿದರೂ ಆಶ್ಚರ್ಯ ಪಡಬೇಕಿಲ್ಲ. ಯಾಕೆಂದರೆ ಕವಿತೆಗಳು ಅಷ್ಟೊಂದು ಆಪ್ತವಾಗಿ, ಅಪ್ಯಾಯಮಾನವಾಗಿ ನಮ್ಮನ್ನು ತಟ್ಟುತ್ತವೆ. ಇಂಥ ಸಂದರ್ಭದಲ್ಲೇ ಕವಿತೆ ಸಾರ್ಥಕತೆಯನ್ನು ಪಡೆದುಕೊಳ್ಳುವುದು.
“ರಾತ್ರಿಯ ತಂಪು ಸುಡುತ್ತಿದೆ / ನಿಶ್ಯಬ್ದದ ಗದ್ದಲ ಕಿವಿ ತಮಟೆಯ ಹರಿಯುತ್ತಿದೆ” ಹೀಗೆ ಪ್ರೀತಿ, ಪ್ರೇಮ, ವಿರಹದ ಜಾಡು ಹಿಡಿದು ಅದರ ಚುಂಗು ಬಿಡದೆ ಹರಿಬಿಟ್ಟ ಒಲವಿನ ಸಾಲುಗಳ ಹೂರಣವೆ ಇಲ್ಲಿದೆ. ‘ಸಾವು’ ಎಂಬ ಅರ್ಥಗರ್ಭಿತ ಕವಿತೆಯಲ್ಲಿ, ಕೊನೆಯದಾಗೊಮ್ಮೆ ನಿನ್ನೊಂದಿಗೆ ಕಳೆದ ಪುರಾತನ ಕ್ಷಣವೊಂದನ್ನು/ ಸೋರುವ ಮೊಲೆ ತೊಟ್ಟಿನ ಬುಡದಲ್ಲಿ ಹಚ್ಚಿಟ್ಟು / ಎರಡೆಸಳು ಚಿಗುರುವವರೆಗೂ / ಅದನ್ನು ಕಾಯಿಸಬೇಕೆನಿಸುತ್ತದೆ. ಹೀಗೆ ಮಾರ್ಮಿಕವಾಗಿ ಕವಯತ್ರಿ ಹೇಳುತ್ತಾರೆ.
ಕವಯತ್ರಿಯ ಪಾಲಿಗೆ, ಕಾವ್ಯವೊಂದು ಪ್ರೀತಿಯ ಸೆಲೆ, ರೂಪಕಗಳ ಮಾಲೆ ಎನ್ನಬಹುದು. ಮನಸ್ಸು ಕೂಡ ಸೂಕ್ಷ್ಮತೆಯ ಕಣಜದ ಭಾರವನ್ನು ಹೊತ್ತಿದೆ. ಇಲ್ಲವೆಂದರೆ ‘ಅಮ್ಮ ಮತ್ತು ಹೊಲಿಗೆ’ ಎಂಬ ಅದ್ಭುತ ಕವಿತೆ ಹುಟ್ಟಿಕೊಳ್ಳಲು ಸಾಧ್ಯವಿರುತ್ತಿರಲಿಲ್ಲ.
“ಅಮ್ಮ ಮತ್ತೆ ಮತ್ತೆ ಹೇಳಿಕೊಡುತ್ತಾಳೆ/ ಹೊಲಿಗೆ ಹಾದಿಗೆ ಬರುತ್ತದೆ/” ಮೆಷಿನ್ನಿನ ರೂಪಕದೊಂದಿಗೆ ಬದುಕಿನ ಪಾಠವ ತಿಳಿಸುವ ಕಾವ್ಯ ನಾವೆಲ್ಲರೂ ಅತಿಯಾಗಿ ಮೆಚ್ಚುವಂತಿದೆ. ಒಂದು ಕಾವ್ಯಧರ್ಮಕ್ಕೆ ಇರಬೇಕಾದ ನಿಪುಣತೆ ಮತ್ತು ಸೃಜನಶೀಲತೆ ಇವರ ಬರಹದಲ್ಲಿದೆ. ಕಾವ್ಯ ಸಂಯೋಜನೆಯನ್ನು ಕೂಡ ಚೆನ್ನಾಗಿ ಅರಿತಂತಹ ಕೌಶಲ್ಯ ಇವರ ಕವಿತೆಗಳದ್ದು. “ಎಲ್ಲವನ್ನೂ ಕುಬ್ಜ ವಾಗಿಸುತ್ತ ಬೆಳೆದ ಅಮ್ಮ /ಹೆಮ್ಮರದ ಸೂಚನೆಯನ್ನು ನೀಡುತ್ತಾ / ನನ್ನೊಳಗೂ ಬೀಜವಾಗಿದ್ದಾಳೆ / ಅಮ್ಮನಂತಿದ್ದು ಅಮ್ಮನಂತಾಗದಿರುವ / ಎಚ್ಚರವಾಗುಳಿದಿದ್ದಾಳೆ ನನ್ನೊಳಗೆ”. ಹೀಗೆ ಕವಿತೆಯೆಂದರೆ ಕೇವಲ ಕವಿತೆಯಲ್ಲ ಇವರ ಪಾಲಿಗೆ- ಅದು ಬದುಕಿನ ಭಾವವು ಹೌದು, ಬದುಕಿನ ಭಾಗವು ಹೌದು ಎಂಬುದಾಗಿ ಗೋಚರಿಸುತ್ತದೆ.
ನಡು ಮಧ್ಯಾಹ್ನದ ಕಣ್ಣು ಸಂಕಲನದಲ್ಲಿ ಪದಗಳಲ್ಲಿಯೆ ಪದ್ಯವನ್ನು ಅಡಗಿಸಿಟ್ಟು ಹೆಣೆಯುವುದರೊಂದಿಗೆ, ಕನ್ನಡದ ಶಬ್ದಗಳನ್ನು ಜೊತೆಗೆ ಕನ್ನಡ ಭಾಷೆಯನ್ನು ಅಷ್ಟೇ ಚೆನ್ನಾಗಿ ದುಡಿಸಿಕೊಂಡಿದ್ದಾರೆ. ನಿಕ್ಕಿಯಾಗಬೇಕು, ಹತ್ಯಾರು, ಅಗೇವು, ಮಿಡಿನಾಗರ, ಶತರಂಗಿ, ಕರತಲಾಮಲಕ, ಗತ್ಯಂತರ, ದೈನೇಸಿತನ, ಅಟೆದಂತಾಗಿ, ಅಂತಃಚಕ್ಷು, ಬಿಸಿಲಕೋಲು, ಈಕ್ಷಿಸು, ಯಮಳ ಯುಗ್ಮ, ಸ್ಪೃಹ, ಚುಚ್ಚುಗವನ್ನೀಗ ಇತ್ಯಾದಿ ಪದಗಳೆಲ್ಲ ಹೊಸ ಅನುಭೂತಿಯನ್ನು ನಮಗೆ ನೀಡುತ್ತದೆ. ಈಗಿನ ಅತ್ಯಾಧುನಿಕ ಕನ್ನಡದ ಕವಿತೆಗಳು ಎಂದು ಕರೆಯಲ್ಪಡುವ ಎಲ್ಲ ಲಕ್ಷಣಗಳೂ ಇಲ್ಲಿವೆ. ಕನ್ನಡದ ವಿಶೇಷ ಪದಗಳೊಂದಿಗೆ ಇಂಗ್ಲಿಷ್ ಮತ್ತು ಹಿಂದಿಯ ಪದಗಳನ್ನು ಸಹ ಕವಿತೆಯ ಸ್ವಾದಕ್ಕೆ ತೊಡಕಾಗದಂತೆ ಲೀಲಾಜಾಲವಾಗಿ ಬಳಸಿಕೊಂಡಿದ್ದಾರೆ.
ಕೃತಿಯ ಮುನ್ನುಡಿಗೆ ಲಲಿತಾ ಸಿದ್ಧಬಸವಯ್ಯ ಶೀರ್ಷಿಕೆ ಕೊಟ್ಟು ಹೇಳಿದಂತೆ, ‘ಹೊಸ ರೂಪಕಗಳ ಹೊಸ ಪದಕೂಟದ ಕವಿ’ ಎಂಬುದು ಇವರ ಕವಿತೆಗಳಿಗೆ ಚೆನ್ನಾಗಿ ಒಪ್ಪುತ್ತದೆ. ಕವಿತೆಗಳನ್ನು ಭ್ರಮಾ ಲೋಕದ ಸಾಲುಗಳಂತೆ ಬಿಂಬಿಸದೆ ವಾಸ್ತವಕ್ಕೆ ಹತ್ತಿರ ಬಂದು ನಿಲ್ಲಿಸಿದ್ದಾರೆ. ಬದುಕು ಮತ್ತು ಕವಿತೆ ಒಂದಕ್ಕೊಂದು ಮುಖಾಮುಖಿಯಾಗುವಂತೆ ನಮಗಿಲ್ಲಿ ಭಾಸವಾಗುತ್ತದೆ.
ಸ್ತ್ರೀ ಬದುಕಿನ ಅಗಾಧತೆ ಮತ್ತು ಸ್ತ್ರೀಯ ಇತಿಮಿತಿಯೊಳಗಿನ ಬದುಕು ಅನಾವರಣಗೊಳ್ಳುವ ಕವಿತೆಗಳಾದ ಹೂವಿಡುವಷ್ಟೆ ನಿಧಾನವಾಗಿ, ನಾವು ಸ್ವಲ್ಪ ಹೀಗೆ, ಆಸೀಫಾ, ಅವಳು, ಅಡುಗೆಯಾಟದ ಹುಡುಗಿ ಮುಂತಾದ ಕವಿತೆಗಳು ಮಹಿಳೆಯ ಅಂತರಂಗವನ್ನು ಬಿಂಬಿಸುತ್ತವೆ. ಕವಯತ್ರಿ ಆಶಾ ಅಭಿಮಾನದಿಂದ ಅಭಿವ್ಯಕ್ತಿ ಪಡಿಸಿದ ಸ್ತ್ರೀಯ ಬಗೆಗಿನ ಈ ಸಾಲು ಪ್ರತಿ ಹೆಂಗಳೆಯರ ಹೆಮ್ಮೆ. “ಹೋಗಲಿ ಬಿಡಿ ನೀವವಳನ್ನು ಆಪಾದ ಮಸ್ತಕವೇ/ ನೋಡಿದುದು ಸರಿಯೇ ಏಕೆಂದರೆ/ ದೇವತೆಯನ್ನು ಹಾಗೆಯೇ ನೋಡಬೇಕಂತೆ”
ನಿಜ ಪ್ರತಿ ಹೆಣ್ಣು ದೇವತೆಯೆ ಆಗಿದ್ದಾಳೆ.
ಇಲ್ಲಿನ ಪ್ರತಿ ಕವಿತೆಯು ಒಂದೊಂದು ಸಂದೇಶ ಸಾರುವಂತಿದೆ. ವಿಷಾದ, ಟೀಕೆಗಳು ಒಂದೊಂದು ಕಡೆ ನಮ್ಮನ್ನು ಎಚ್ಚರಿಸುತ್ತವೆ. ಹೆಚ್ಚಿನ ಕವಿತೆಗಳು ಹೆಣ್ಣಿನ ಭಾವವನ್ನು ಸ್ಪುರಿಸುತ್ತ ವೈಯುಕ್ತಿಕತೆಯನ್ನು, ಸಾಮಾಜಿಕತೆಯನ್ನಾಗಿಸಿ ಸಮಾಜವನ್ನು ಧೈರ್ಯವಾಗಿ ಎದುರಿಸುವ ನೀತಿ ಪಾಠ ಹೇಳಿಕೊಟ್ಟಂತಿದೆ. ಸಂಕಲನವನ್ನು ಓದಿದ ಮೇಲೆ, ನಿಗೂಢವಾಗಿದ್ದ ಹೆಣ್ಣಿನ ಮನಸ್ಸೊಂದು ಈಗ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಹಕ್ಕಿಯಾಗಿದೆ ಎಂಬುದಾಗಿ ನಮಗಿಲ್ಲಿ ಭಾಸವಾಗುತ್ತದೆ. ತುಂಬು ಆತ್ಮವಿಶ್ವಾಸದಿಂದ ಬರೆದ ಈ ಕವಿತೆಗಳಿಗೆ ಅಪಾರ ಜನ ಮನ್ನಣೆ ಸಿಗಲಿ ಎಂಬುದಾಗಿ ನಮ್ಮ ಕಾಲದ ಮಹತ್ವದ ಕವಯತ್ರಿ ಆಶಾರವರಿಗೆ ನಾವೆಲ್ಲರೂ ಮನಪೂರ್ವಕವಾಗಿ ಹಾರೈಸೋಣ.
ಸಂಗೀತಾ ರವಿರಾಜ್ ಅವರು ಮೂಲತಃ ಕೊಡಗಿನವರು. ಎಂ.ಎ ಅರ್ಥಶಾಸ್ತ್ರ ಬಿ.ಇಡಿ ಪದವೀಧರರಾಗಿದ್ದು, ಹಲವು ಪತ್ರಿಕೆಗಳಲ್ಲಿ ಇವರ ಕವಿತೆಗಳು, ಪ್ರಬಂಧಗಳು ಮತ್ತು ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಸಂಗೀತಾ ಅವರು ‘ಚೆಂಬು ಸಾಹಿತ್ಯ ವೇದಿಕೆ’ ಯನ್ನು ಹುಟ್ಟುಹಾಕಿದ್ದಾರೆ. ಕಪ್ಪು ಹುಡುಗಿ(ಕವನ ಸಂಕಲನ), ಕಲ್ಯಾಣ ಸ್ವಾಮಿ(ಕಾದಂಬರಿ), ನಿರುತ್ತರ(ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು.